ನಾಯಕತನ -
	ಯಾವ ವ್ಯಕ್ತಿ ತನ್ನ ಶಕ್ತಿಸಾಮಥ್ರ್ಯಗಳಿಂದ ಮತ್ತಿತ್ತರ ಗುಣಗಳಿಂದ ಸಂಘದ ಸದಸ್ಯರನ್ನು ಒಂದು ವಿಶಿಷ್ಟ ರೀತಿಯಲ್ಲಿ ನಿರ್ದಿಷ್ಟ ದಿಕ್ಕಿನಲ್ಲಿ ಒಂದು ಗುರಿ ಸಾಧನೆಗಾಗಿ ತನ್ನ ಹಿಂದೆ ಕೊಂಡೊಯ್ಯುತ್ತಾನೋ ಅವನೇ ನಾಯಕ. ನಾಯಕನ ಕೆಲಸವೇ ನಾಯಕತನ (ಲೀಡರ್‍ಷಿಪ್).

	ನಾಯಕನೆಂದರೆ ನಮ್ಮ ಮನಸ್ಸಿಗೆ ತಕ್ಷಣ ಬರುವುದು ಗಾಂಧಿ, ನೆಹರೂ, ಚರ್ಚಿಲ್, ಲಿಂಕನ್ ಮತ್ತು ಮಾವೋ ಇತ್ಯಾದಿ ರಾಜಕೀಯ ನಾಯಕರುಗಳು. ನಾಯಕರ ಕ್ಷೇತ್ರ ರಾಜಕೀಯ ಒಂದೇ ಅಲ್ಲ. ಅವರು ಧಾರ್ಮಿಕ, ಆಡಳಿತ, ಸಾಮಾಜಿಕ, ಆರ್ಥಿಕ, ವಾಣಿಜ್ಯ, ಕೈಗಾರಿಕೆ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಇರುತ್ತಾರೆ. ಒಂದೊಂದು ಕಾರ್ಯಕ್ಷೇತ್ರಗಳಲ್ಲೂ ನಾಯಕರೇ ಅಲ್ಲದೆ ಉಪನಾಯಕರು ಮತ್ತು ಸಹಾಯಕ ನಾಯಕರೂ ಅವರ ಅನುಯಾಯಿಗಳೂ ಇರುತ್ತಾರೆ. ಒಂದು ವಿಶಾಲ ದೃಷ್ಟಿಯಲ್ಲಿ ನೋಡುವುದಾದರೆ ಪ್ರತಿಯೊಬ್ಬ ವ್ಯಕ್ತಿಯು ಒಂದು ಕ್ಷೇತ್ರದಲ್ಲಿ ನಾಯಕನಾಗಿ ಮತ್ತೊಂದು ಕ್ಷೇತ್ರದಲ್ಲಿ ಅನುಚರನಾಗಿಯು ಇರುತ್ತಾನೆ. 

	ಸತತವಾಗಿ ಸಮಾಜದಲ್ಲಿ ಮತ್ತಿತ್ತರ ಕ್ಷೇತ್ರಗಳಲ್ಲಿ ಬದಲಾಗುತ್ತಿರುವ ಸನ್ನಿವೇಶಗಳು ನಾಯಕನ ಅವಿರ್ಭಾವಕ್ಕೆ ಕಾರಣವಾಗುತ್ತದೆ. ಅಂಥ ಸಂಧರ್ಭಗಳಲ್ಲಿ ಕೆಲವನ್ನು ಈ ಮುಂದೆ ವಿವರಿಸಲಾಗಿದೆ.
ಸಂಘ ಅಥವಾ ಸಂಸ್ಥೆಯ ಸಂಕೀರ್ಣತೆ : ಯಾವುದೆ ಒಂದು ಸಂಘ ಅಥವಾ ಸಂಸ್ಥೆ ಸಣ್ಣದಾಗಿದ್ದಾಗ ಮತ್ತು ಅದರ ಕೆಲಸ ಕಾರ್ಯಗಳು ಸರಳವಾಗಿರುವಾಗ ಒಬ್ಬನೇ ನಾಯಕ ಅದನ್ನು ನಿರ್ವಹಿಸಬಲ್ಲ. ಆ ಸಂಸ್ಥೆ ಬೆಳೆಯುತ್ತಾ ಹೋದಂತೆ, ಅದರ ಕೆಲಸ ಕಾರ್ಯಗಳು ಅಧಿಕವಾಗಿ ಕಾರ್ಯನಿರ್ವಹಣೆ ಸಂಕೀರ್ಣವಾಗುತ್ತದೆ. ಅಂಥ ಸಂಧರ್ಭಗಳಲ್ಲಿ ನಾಯಕ ತನ್ನ ಕೆಲಸ ಕಾರ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ಹಂಚಿ ಪ್ರತಿಯೊಂದು ವಿಭಾಗಕ್ಕೂ ಒಬ್ಬೊಬ್ಬ ನಾಯಕನನ್ನು ನೇಮಿಸಬೇಕಾಗುತ್ತದೆ. ಹೀಗೆ ನಾಯಕರು ಕೆಲವೊಮ್ಮೆ ಉಪನಾಯಕರು ಅವತರಿಸುತ್ತಾರೆ.

ಸಂಘದ ಅಸ್ತಿತ್ವಕ್ಕೆ ಸಂಚಕಾರ : ಸಂಘದ ಅಸ್ತಿತ್ವಕ್ಕೆ ಹೊರಗಿನವರಿಂದ ಧಕ್ಕೆಯುಂಟಾದಾಗ ಸಂಸ್ಥೆಯನ್ನು ಸಂರಕ್ಷಿಸಲು ಧೈರ್ಯ ಸಾಹಸ, ಚಮತ್ಕಾರಗಳು ಉಳ್ಳ ವ್ಯಕ್ತಿ ನಾಯಕನಾಗಿ ಅವತರಿಸುತ್ತಾನೆ.

ಸಂಸ್ಥೆಯಲ್ಲಿ ಒಡಕು : ಯಾವುದೋ ಕಾರಣಗಳಿಂದ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳುಂಟಾಗಿ ಸಂಸ್ಥೆ ಒಡೆದುಹೋಗುವ ಚಿಹ್ನೆಗಳು ಕಂಡುಬಂದಾಗ, ಆ ಸಂಸ್ಥೆಯಲ್ಲಿ ಸಂಘಟನೆ ಸಮನ್ವಯತೆ ಒಮ್ಮತ ಅಭಿಪ್ರಾಯಗಳನ್ನು ಉಂಟುಮಾಡಿ, ಸಂಸ್ಥೆಯನ್ನು ನೆಲೆಗೊಳಿಸಲು ಹೊಸ ನಾಯಕ ಉದ್ಭವಿಸುತ್ತಾನೆ.

ಪ್ರಸ್ತುತ ನಾಯಕನ ಅಸಮರ್ಥತೆ : ಪ್ರಸ್ತುತ ನಾಯಕ ಅಸಮರ್ಥನಾಗಿ, ಅವನಲ್ಲಿ ಅನಾಚಾರ ಅವ್ಯವಹಾರ, ಅನ್ಯಾಯಗಳು ತಲೆದೋರಿದಾಗ ಹಳೆಯ ನಾಯಕನ ಸ್ಥಾನದಲ್ಲಿ ನೂತನ ನಾಯಕ ಹುಟ್ಟಿಕೊಳ್ಳುತ್ತಾನೆ.
ಪ್ರತಿಸ್ಪಧೆರ್É: ಒಂದೇ ಸಂಸ್ಥೆಯಲ್ಲಿನ ಅನೇಕ ಮಂದಿ ನಾಯಕರಾಗಲು ಪೈಪೋಟಿ ನಡೆದಾಗ, ಅವರಲ್ಲಿ ಅತಿ ಪ್ರಬಲನಾದವ ನಾಯಕನಾಗಿ ಅವಿರ್ಭಜಿಸುತ್ತಾನೆ.

	ಸಮಾಜ ಮನೋವಿಜ್ಞಾನಿಗಳಾದ ಬಾರ್ಟಲೆಟ್, ಚಾಲ್ರ್ಸ ಬರ್ಡ್, ಲೂಯಿಸ್ ಟರ್ಮನ್, ಕರ್ಟ್‍ಲೆವಿನ್, ಮತ್ತಿತರರು ತಮ್ಮದೆ ಆದ ಕೆಲವು ಆಧಾರಗಳ ಮೇಲೆ (ನಾಯಕರ ಪ್ರಬಾವ, ಅವರ ಧ್ಯೇಯ ಮತ್ತು ವ್ಯಕ್ತಿತ್ವ ) ನಾಯಕರನ್ನು ಅನೇಕ ವರ್ಗಗಳಾಗಿ ವಿಂಗಡಿಸಿದ್ದಾರೆ. ಒಂದೊಂದು ವರ್ಗೀಕರಣವು ನಾಯಕತ್ವದ ಒಂದೊಂದು ಮುಖದ ಪರಿಚಯ ಮಾಡಿಕೊಡುತ್ತದೆಯೇ ವಿನಃ ಪೂರ್ಣ ಪರಿಚಯವನ್ನು ಮಾಡಿಕೊಡುವುದಿಲ್ಲ. ಅವುಗಳಲ್ಲಿ ಮುಖ್ಯವಾದುವುಗಳನ್ನು ಈ ಕೆಳಗೆ ತಿಳಿಸಲಾಗಿದೆ.

ಸುಧಾರಕ ನಾಯಕ : ಬಹಳ ಹಿಂದಿನಿಂದಲೂ ನಡೆದು ಬಂದಿರುವ ಅಪಾಯಕಾರಿ ಪದ್ದತಿಗಳನ್ನು ದೋಷಗಳನ್ನು ತೊಡೆದುಹಾಕಿ ವರ್ತಮಾನಕ್ಕೆ ಸೂಕ್ತವಾದ ಪದ್ಧತಿಗಳನ್ನು ರೂಡಿಗೆ ತರುವ ಮತ್ತು ಸಮಾಜ ಕಲ್ಯಾಣಕ್ಕೆ ಶ್ರಮಿಸುವಾತ. ಉದಾ : ರಾಜಾರಾಮ್ ಮೋಹನ್‍ರಾಯ್.

ಸಾಂಪ್ರಾದಾಯಿಕ ನಾಯಕ: ಪ್ರಾಚೀನ ಸಂಸೃತಿ, ಉದಾತ್ತ ಧ್ಯೇಯಗಳು, ಸಾರ್ವಕಾಲಿಕ ತತ್ವಗಳು-ಇವನ್ನು ಉಳಿಸಿಕೊಳ್ಳಲು ಶ್ರಮಿಸುವವ. ಉದಾ : ಶಂಕರ ರಾಮಾನುಜ ಇತ್ಯಾದಿ.

ಪ್ರಜ್ಞಾವಂತ ನಾಯಕ : ಯಾವುದಾದರು ಒಂದು ಕ್ಷೇತ್ರದಲ್ಲಿ ಆಳವಾದ ಅನುಭವ, ವಿಶಾಲದೃಷ್ಟಿ, ಹೃದಯ ವೈಶಾಲ್ಯಗಳುಳ್ಳವನು, ತನ್ನ ಸಿದ್ದಾಂತ, ತತ್ವ ಮತ್ತು ಕಲ್ಪನೆಗಳಿಂದ ಜನಸಾಮಾನ್ಯರ ಆಲೋಚನೆ ವಿಚಾರ ಚಟುವಟಿಕೆ ಮತ್ತು ಜನಜೀವನದ ಮೇಲೆ ಮಹತ್ವದ ಪ್ರಭಾವವನ್ನು ಬೀರುತ್ತಾನೆ. ಉದಾ: ಗಾಂಧಿ, ಲೆನಿನ್ ಮತ್ತು ಲಿಂಕನ್. ಮೊದಲಾದವರು.
ಆಡಳಿತ ನಾಯಕ : ಯಾವುದಾದರೊಂದು ಸಂಸ್ಥೆಯ  ಧ್ಯೇಯಗಳಿಗಾಗಿ ದುಡಿದು ಅದರ ಹಿರಿಮೆಯನ್ನು ಹೆಚ್ಚಿಸಲು ಮುಂಬರುವವ. ಈತ ತನ್ನ ಕೆಳಗಿನ ಅಧಿಕಾರಿಗಳಿಂದ ಸಹಕಾರವನ್ನು ಸಂಪಾದಿಸಿ, ಪ್ರತಿಯೊಬ್ಬನಿಂದಲೂ ಸಂಸ್ಥೆಯ ಕೆಲಸವನ್ನು ತನ್ನ ಅಧಿಕಾರ ಬಲದಿಂದ ಮಾಡಿಸುವುದೇ ಅಲ್ಲದೆ ಅನುಚರರನ್ನು ಹತೋಟಿಯಲ್ಲಿಟ್ಟುಕೊಂಡು ಸಂಸ್ಥೆಯ ನಿಯಮಗಳಿಗನುಗುಣವಾಗಿ ಕೆಲಸಮಾಡುತ್ತಾನೆ. ಉದಾ : ಕಾಲೇಜಿನ ಪ್ರಿನ್ಸಿಪಾಲ್.

ರಾಜಕೀಯ ನಾಯಕ: ರಾಜಕೀಯ ನಾಯಕರಲ್ಲಿ ನಾಲ್ಕು ವರ್ಗದವರುಂಟು-ಅನುನಯಪರ ಅಥವಾ ಪ್ರಜಾತಂತ್ರವಾದಿ ನಾಯಕ, ನಿರಂಕುಶ ಅಥವಾ ಸರ್ವಾಧಿಕಾರ ನಾಯಕ, ಸಂಕೇತ ನಾಯಕ, ಐಂದ್ರಜಾಲಿಕ ನಾಯಕ. ಪ್ರಜಾತಂತ್ರವಾದಿ ನಾಯಕ ಪ್ರಜೆಗಳಿಂದ ಚುನಾಯಿತರಾಗಿ ಬಂದವನಾದುದರಿಂದ ಅವರ ಪ್ರತಿನಿಧಿಯಾಗಿ ಹಿತಚಿಂತಕನಾಗಿ, ಬಲ ಪ್ರಯೋಗಿಸದೆ, ವೈಯಕ್ತಿಕ ಅಭಿಪ್ರಾಯಗಳನ್ನು ಬಲವಂತವಾಗಿ ಅವರ ಮೇಲೆ ಹೊರಿಸದೆ, ಅವರ ಮನವೊಲಿಸಿ ಸಮ್ಮತಿ ಪಡೆದು ಸಹಕಾರ ಸಂಪಾದಿಸಿ ಅವರನ್ನು ಆಳುತ್ತಾನೆ. ಈತ ಸಾರ್ವಜನಿಕ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆಯನ್ನಿತ್ತು ಕಾರ್ಯೋನ್ಮುಖನಾಗುತ್ತಾನೆ. ನಿರಂಕುಶ ನಾಯಕ ತನ್ನ ಉತ್ತಮ ಶಕ್ತಿ ಸಾಮಥ್ರ್ಯಗಳಿಂದಲೂ ಬಲಪ್ರಯೋಗ ಮಾಡಿಯೂ ಅನುಚರರನ್ನು ಆಳುತ್ತಾನೆ. ಅವರ ಸಲಹೆ ಸಮ್ಮತಿ ಯಾವುದನ್ನೂ ನೀರಿಕ್ಷಿಸುವುದಿಲ್ಲ. ಯಾವ ನಿರ್ಧಾರವನ್ನಾದರೂ ತಾನೊಬ್ಬನೇ ಕೈಗೊಂಡು ಅನುಚರರು ಚಕಾರವೆತ್ತದೆ ಅನುಸರಿಸುವಂತೆ ಆಜ್ಞಾಪಿಸುತ್ತಾನೆ. ಸಂಕೇತ ನಾಯಕ ಅಥವಾ ನಾಮಮಾತ್ರ ನಾಯಕನಿಗೆ ಸಂವಿಧಾನದ ಪ್ರಕಾರ ಸರ್ವೋಚ್ಚ ಸ್ಥಾನದಲ್ಲಿದ್ದರೂ ಅಧಿಕಾರವನ್ನು ಸ್ವತಂತ್ರವಾಗಿ ಚಲಾಯಿಸುವ ಹಕ್ಕಿರುವುದಿಲ್ಲ. ಈತ ದೇಶದ ಪ್ರಧಾನ ಮಂತ್ರಿಯ ಅಥವಾ ಮಂತ್ರಿಮಂಡಲದ ಸಲಹೆಯಂತೆ ತನ್ನ ಅಧಿಕಾರವನ್ನು ಚಲಾಯಿಸಬೇಕು. ಐಂದ್ರಜಾಲಿಕ ನಾಯಕ ತನ್ನ ಅಸಾಧಾರಣ ಶಕ್ತಿ ಸಾಮಥ್ರ್ಯಗಳಿಂದ ವ್ಯಕ್ತಿತ್ವದಿಂದ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿ, ತನ್ನ ಆದೇಶವನ್ನು ಶಿರಸಾವಹಿಸಿ ಪಾಲಿಸುವಂತೆ ಮಾಡುತ್ತಾನೆ. ಈತ ನಿರಂಕುಶನಾಗಿರಬಹುದು.

ಪ್ರವೀಣನಾಯಕ : ಈತ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿಂದ ಮತ್ತು ಪಡೆದಿರುವ ಪ್ರಾವೀಣ್ಯದಿಂದ ಸಂಸ್ಥೆಯ ಸಲಹೆಗಾರನಾಗಿ ಮಾರ್ಗದರ್ಶಕನಾಗಿ, ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಾನೆ.

	ಹೀಗೆ ನಾಯಕರನ್ನು ಅವರ ಕಾರ್ಯಕ್ಷೇತ್ರ, ಕಾರ್ಯವಿಧಾನ ಮತ್ತು ವ್ಯಕ್ತಿತ್ವದ ಮೇಲೆ ವರ್ಗೀಕರಣ ಮಾಡಿದ್ದಾರೆ.

	ನಾಯಕನಿಗೆ ಇರಬೇಕಾದ ವಿಶೇಷ ಲಕ್ಷಣಗಳು ಆತನ ಕಾರ್ಯಕ್ಷೇತ್ರ, ಕಾರ್ಯವಿಧಾನ, ಸಂದರ್ಭ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಉದಾ : ಸಂಸ್ಥೆಯ ನಾಯಕನಿಗೆ ಕೆಲವು ವಿಶೇಷ ಗುಣಗಳಿರಬೇಕು. ಪ್ರಜಾತಂತ್ರವಾದಿ  ನಾಯಕನಿಗೆ ಕೆಲವು ಬೇರೆ ಗುಣಗಳಿರಬೇಕು. ಆದರೆ ಒಟ್ಟಿನಲ್ಲಿ ಆತ ಅನುಚರಿಗಿಂತ ಉತ್ತಮನಾಗಿರಬೇಕು ಮತ್ತು ಅವನಲ್ಲಿ ವಿಶೇಷ ಗುಣಗಳು ಅಧಿಕ ಪ್ರಮಾಣದಲ್ಲಿ ಇರಬೇಕು. ಈ ಕೆಳಗೆ ಅವುಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡಲಾಗಿದೆ.
ಕೆಲವು ವೈಯಕ್ತಿಕ ಪ್ರತಿಷ್ಠೆಗಳು ಮತ್ತು ಘನತೆಗಳಿರಬೇಕು. ಇವು ಆತನ ಸಾಧನೆಗಳು, ಗ್ರಂಥಗಳು, ಬಿರುದುಬಾವಲಿಗಳು, ಪ್ರಶಸ್ತಿಗಳು ಇತ್ಯಾದಿಗಳಿಂದ ಬರುತ್ತವೆ. ಇವು ಅನುಚರರಲ್ಲಿ ಭಕ್ತಿ ಗೌರವವನ್ನು ಪ್ರಚೋದಿಸುತ್ತವೆ.
ತಾಳ್ಮೆ, ಕಷ್ಟ ಸಹಿಷ್ಣುತೆ, ವಿಶಾಲವಾದ ಮನಸ್ಸು, ಅಚಲತೆ, ಕಾರ್ಯೋನ್ಮುಖತೆ, ಕಾರ್ಯ ನಿಷ್ಠೆ ಇತ್ಯಾದಿಗಳಿರಬೇಕು.
ಅಭೇದ್ಯನಾಗಿರಬೇಕೆಂದರೆ ಅನುಚರರ ನಿರೀಕ್ಷಣೆಗೆ ನಿಲುಕದಂತಿರಬೇಕು. 

ನುಡಿದಂತೆ ನಡೆಯಬೇಕು. ಧೇಯ, ಆತ್ಮವಿಶ್ವಾಸ, ಸಾಧನೆಯ ಗುರಿಯಲ್ಲಿ ನಂಬಿಕೆ ಇತ್ಯಾದಿಗಳಿರಬೇಕು.
ಹೂವಿನಂತೆ ಮೃದುವಾದ ಮನಸ್ಸಿದ್ದರೂ, ಸಮಯದಲ್ಲಿ ವಜ್ರದಂತೆ ಕಠಿಣವಾಗಿರಬೇಕು.
ಅನುಚರರಿಗಿಂತ ಹೆಚ್ಚು ಬುದ್ಧಿವಂತನಾಗಿರಬೇಕು.

ಅನುಚರರ ಮೌಲ್ಯ, ಮನೋಭಾವ ಮತ್ತು ಅಭ್ಯಾಸಗಳಲ್ಲಿ ಅನನ್ಯನಾಗಬೇಕು.
ಸ್ವಾವಲಂಬನೆ, ಸಮಯಸ್ಪೂರ್ತಿ, ಮಿತೃತ್ವ, ವಿಶ್ವಾಸ, ಮುಂದಾಳುತನ, ಬಹಿರ್ಮುಖತೆ, ಹಾಸ್ಯಪ್ರವೃತ್ತಿ, ಸಂಘಟನಾಶಕ್ತಿ ಇತ್ಯಾದಿಗಳಿರಬೇಕು. ಅಂತೆಯೇ ದ್ವೇಷ, ಮಾತ್ಸರ್ಯ, ಅಸೂಯೆ, ಭೀತಿ, ಸಂಕುಚಿತ ಮನೋಭಾವ ಇತ್ಯಾದಿಗಳು ಇರಬಾರದು.

	ನಾಯಕ ಸಮಾಜದಲ್ಲಿ ಅನೇಕ ವಿಧವಾದ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಮೊಟ್ಟಮೊದಲು ಆತ ಸಂಸ್ಥೆಯಲ್ಲಿ ಸಂಘಟನೆ ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಬೇಕು. ಸಂಘದ ಕೆಲಸ ಕಾರ್ಯಗಳನ್ನು ಸದಸ್ಯರಿಗೆ ಹಂಚಿ ಅವರ ಸಹಕಾರದಂದ ಸಂಸ್ಥೆಯ ಧ್ಯೇಯಗಳನ್ನು ಸಾಧಿಸಬೇಕು; ಸಂಸ್ಥೆ ತನ್ನ ಧ್ಯೇಯಗಳನ್ನು ಸಾಧಿಸಲು ಅನುಸರಿಸಬೇಕಾದ ಮಾರ್ಗ ಸಹಕರಿಸಬೇಕಾದ ವ್ಯಕ್ತಿಗಳು, ಅಗತ್ಯವಾದ ಹಣ, ಬೇಕಾದ ಸಾಲ, ಇವುಗಳ ಬಗ್ಗೆ ಒಂದು ಯೋಜನೆಯನ್ನು ಸಿದ್ದಗೊಳಿಸಬೇಕು. ಸಂಸ್ಥೆಯ ನೀತಿ ನಿಯಮಗಳನ್ನು ರೂಪಿಸಿ, ಮುಂದಾಳಾಗಿ ಅನುಷ್ಠಾನಕ್ಕೆ ತಂದು ಅನುಚರರು ಅವÀನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಸಂಸ್ಥೆಯ ಪ್ರತಿನಿಧಿಯಾಗಿ ಇತರ ಸಂಸ್ಥೆಗಳೊಡನೆ ವ್ಯವಹರಿಸಬೇಕು ಮತ್ತು  ತಾನು ಅಲ್ಲಿ ಕೈಗೊಂಡ ನಿರ್ಧಾರವನ್ನು ಅನುಚರರೊಡನೆ ಚರ್ಚಿಸಿ ಅವರ ಸಮ್ಮತಿ ಪಡೆದು ಅನುಷ್ಠಾನಕ್ಕೆ ತರಬೇಕು. ಅನೇಕ ಸಂದರ್ಭಗಳಲ್ಲಿ ತಜ್ಞನಾಗಿ ಮಾರ್ಗದರ್ಶನ ನೀಡಬೇಕು; ಅಲ್ಲದೆ ತನ್ನ ನಡೆನುಡಿಗಳು ಆಚಾರ ವ್ಯವಹಾರಗಳಿಂದ ಅವುಗಳಿಗೆ ಮಾದರಿಯಾಗಬೇಕು. ಸಂಸ್ಥೆಯ ಆಂತರಿಕ ರಚನೆಯನ್ನು ರೂಪಿಸಿ ಸದಸ್ಯರ ನಡುವಣ ಸಂಬಂಧವನ್ನು ಮಧುರಗೊಳಿಸಬೇಕು. ಅಂತೆಯೇ ಅನುಚರರ ವರ್ತನೆ, ಕಾರ್ಯನಿರ್ವಹಣೆ, ದಕ್ಷತೆ, ನಿಸ್ಪøಹತೆ ಸಹಕಾರ ಇವುಗಳಿಗೆ ಯಥೋಚಿತ ಬಹುಮಾನ ನೀಡಬೇಕು. ವಿರೋಧಿಸಿದವರನ್ನು ದಂಡಿಸಬೇಕು. ಸಂಘದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ವಿರಸ ಉಂಟಾದಾಗ ಮಧ್ಯವರ್ತಿಯಾಗಿ ನಿಷ್ಪಕ್ಷ ನ್ಯಾಯಮೂರ್ತಿಯಾಗಿ ಸಮಸ್ಯೆಯನ್ನು ಪರಿಹರಿಸಿ ಶಾಂತಿಯನ್ನು ಮತ್ತು ಮಧುರ ವಾತಾವರಣವನ್ನು ಸ್ಥಾಪಿಸಬೇಕು. ಸಂಸ್ಥೆಯ ಅನುಚರರ ಕೋಪತಾಪಗಳಿಗೆ ದ್ವೇಷಮಾತ್ಸರ್ಯಗಳಿಗೆ ಹೊಗಳಿಕೆ ತೆಗಳಿಕೆಗೆ, ಸೋಲು-ಗೆಲುವುಗಳಿಗೆ ಯಜ್ಞಪಶು ಆಗಬಾರದು.

	ನಾಯಕತನದ ಪರೀಕ್ಷೆಗಳು ಮತ್ತು ತರಬೇತಿ: ನಾಯಕತ್ವವನ್ನು ಗುರುತಿಸಲು ಮನೋವಿಜ್ಞಾನಿಳು ಕೆಲವು ಪರಿಕ್ಷೆಗಳನ್ನು ಮತ್ತು ಸಂದರ್ಶನಗಳನ್ನು ಸೂಚಿಸಿದ್ದಾರೆ.

1. ಕ್ರಿಯಾತ್ಮಕ ಅಥವಾ ವರ್ತನಾ ಪರೀಕ್ಷೆಗಳು : ಇದರಲ್ಲಿ ಅಭ್ಯರ್ಥಿಗಳನ್ನು ಒಂದು ಕೃತಕ ಸನ್ನಿವೇಶಕ್ಕೆ ಒಳಪಡಿಸಿ ಅಲ್ಲಿ ಅವರು ತಮಗೆ ಒದಗಿಸಿರುವ ವಸ್ತುಗಳನ್ನು ಬಳಸಿಕೊಂಡು ಸಮಸ್ಯೆಯನ್ನು ಹೇಗೆ ಬಗೆಹರಿಯಲೆತ್ನಿಸುತ್ತಾರೆ, ಹೇಗೆ ಇತರರ ಸಹಕಾರ ಸಹಾನುಭೂತಿಯನ್ನು ಸಂಪಾದಿಸುತ್ತಾರೆ ಎಂಬ ವರ್ತನೆಗಳನ್ನು ವೀಕ್ಷಿಸಿ ನಾಯಕನನ್ನು ಆಯ್ಕೆ ಮಾಡುತ್ತಾರೆ. ಇಂಥ ವರ್ತನೆ ಪರೀಕ್ಷೆಗಳು ಅನೇಕವಾಗಿವೆ: ಉದಾ: ನದಿ ದಾಟುವ ಪರೀಕ್ಷೆ, ಬಾವಿಯಲ್ಲಿ ಬಿದ್ದವರನ್ನು ಎತ್ತುವ ಪರೀಕ್ಷೆ, ಮನೆಗೆ ಬೆಂಕಿ ಬಿದ್ದಾಗ ಅದನ್ನು ಆರಿಸುವ ಪರೀಕ್ಷೆ ಇತ್ಯಾದಿ. ಇವನ್ನು ಸೈನ್ಯಾಧಿಕಾರಿಗಳ ಆಯ್ಕೆಯಲ್ಲಿ ಬಳಸಲಾಗುತ್ತದೆ.

2. ಪ್ರತಿಚಲನ ಸಂದರ್ಶನ : ಇಲ್ಲಿ ಅಭ್ಯರ್ಥಿಗಳನ್ನು ಪ್ರತಿಚಲನ ಸಂದರ್ಶನಕ್ಕೆ ಒಳಪಡಿಸಲಾಗುತ್ತದೆ. ಅಂಥ ಸಂಧರ್ಭಗಳಲ್ಲಿ ವ್ಯಕ್ತಿ ತನ್ನ ಸಮತೋಲನವನ್ನು ಕಳೆದುಕೊಳ್ಳದೆ ಶಾಂತವಾಗಿ ಸಂದರ್ಶನಕಾರರನ್ನು ಎದುರಿಸುತ್ತಾನೆ ಎಂಬುದನ್ನು ವೀಕ್ಷಿಸಲಾಗುತ್ತದೆ. ಸಂದರ್ಶನದಲ್ಲಿ ಒಬ್ಬ ಸೈನ್ಯಾಧಿಕಾರಿ, ಮನೋವಿಜ್ಞಾನಿ, ಮನೋರೋಗ (ವೈದ್ಯ) ಚಿಕಿತ್ಸಕ, ವೈದ್ಯ-ಇವರು ಇರುತ್ತಾರೆ.  ಸಂದರ್ಶನದ ಸನ್ನಿವೇಶ ಭಯಾನಕವಾಗಿರುತ್ತದೆ. ಯಶಸ್ವಿಯಾದವನನ್ನು ಆಯ್ಕೆಮಾಡಲಾಗುತ್ತದೆ.

	ನಾಯಕನ ಆಯ್ಕೆಯಲ್ಲಿ ವ್ಯಕ್ತಿತ್ವ ಪರೀಕ್ಷೆಗಳು, ಬುದ್ಧಿಶಕ್ತಿ ಪರೀಕ್ಷೆಗಳು, ದೈಹಿಕಶ್ರಮ ಪರೀಕ್ಷೆಗಳು, ಮುಂತಾದವನ್ನು ಬಳಸುತ್ತಾರೆ.

	ನಾಯಕನ ಕಾರ್ಯಕ್ಷೇತ್ರಕ್ಕೆ ತಕ್ಕಂತೆ ತರಬೇತಿಯನ್ನು ನೀಡಲು ಕೆಲವು ಕೇಂದ್ರಗಳೂ ಇವೆ. ಉದಾ: ಆಡಳಿತ ತರಬೇತಿ ಕಾಲೇಜು, ಸೈನಿಕ ಶಿಕ್ಷಣ ಕಾಲೇಜು, ವಾಣಿಜ್ಯ ಆಡಳಿತ ಕಾಲೇಜು, ಕೈಗಾರಿಕಾ ಒಳ ತರಬೇತಿ ಮತು ್ತಗಾಂಧೀಜಿಯವರು ಆಶ್ರಮದಲ್ಲಿ ಇತ್ತ ಕ್ರಮ ಇತ್ಯಾದಿ. ಈ ತರಬೇತಿಯಿಂದ ನಾಯಕ ಮತ್ತಷ್ಟು ಯಶಸ್ವಿಯಾಗಿ ತನ್ನ ಕಾರ್ಯಗಳನ್ನು ನಿರ್ವಹಿಸಬಲ್ಲ ಶಕ್ತಿ ಪಡೆಯುತ್ತಾನೆ.
(ಐ.ಎನ್.)

	ಶಾಲಾಕಾಲೇಜುಗಳಲ್ಲಿ ನಾಯಕತನಕ್ಕೆ ಶಿಕ್ಷಣ : ಸಹಪಾಠಿಗಳ ವಿಶ್ವಾಸವನ್ನು ಗಳಿಸಿ ಅವರನ್ನು ಸಾಮೂಹಿಕ ಕಾರ್ಯಗಳಲ್ಲಿ ತೊಡಗಿಸಿ ನಿರ್ದೇಶಿಸಿ ನಡೆಸಿಕೊಂಡು ಬರುವ ಜಾಣ್ಮೆಯನ್ನೂ, ಸಾಮಥ್ರ್ಯವನ್ನೂ ಬೆಳೆಸುವ ಉದ್ದೇಶದಿಂದ ಶಾಲಾಕಾಲೇಜುಗಳು ಅನೇಕ ಔಪಚಾರಿಕ (ಫಾರ್ಮಲ್) ಹಾಗೂ ಅನೌಪಚಾರಿಕ (ಇನ್‍ಫಾರ್ಮಲ್) ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ.  ಸಾಮೂಹಿಕ ಜೀವನಕ್ಕೆ (ಗ್ರೂಪ್ ಲಿವಿಂಗ್) ಮಕ್ಕಳನ್ನು ಸಿದ್ದಪಡಿಸುವುದು ಶಿಕ್ಷಣದ ಉದ್ದೇಶಗಳಲ್ಲಿ ಒಂದೆಂಬ ಅಂಶವನ್ನು ಎಲ್ಲ ದೇಶಗಳು ಎತ್ತಿ ಹಿಡಿದಿವೆ. ಸಾಮೂಹಿಕ ಜೀವನದ ಯಶಸ್ಸಿಗೆ ದಕ್ಷ ನಾಯಕರಂತೆ ಜಾಣ ಅನುಯಾಯಿಗಳು ಅಗತ್ಯ. ಎಂದ ಮೇಲೆ ನಾಯಕ ಶಿಕ್ಷಣಕ್ಕೆ ಎರಡು ಆಯಾಮಗಳಿರುವುದು ವ್ಯಕ್ತಪಡುತ್ತದೆ-ನಾಯಕ ಹಾಗೂ ಅನುಯಾಯಿಗಳಿಬ್ಬರಿಗೂ ಶಿಕ್ಷಣ.

	ಜಗತ್ತಿನ ಬಹುತೇಕ ದೇಶಗಳು ಪ್ರಜಾಪ್ರಭುತ್ವ  ರಾಷ್ಟ್ರಗಳಾಗಿವೆ. ಅಲ್ಲಿನ ಜನರೇ ಆಡಳಿತಾಧಿಕಾರ ಪಡೆದಿರುವ ವ್ಯಕ್ತಿಗಳಾದರೂ ಅವರು ತಮ್ಮ ಅಧಿಕಾರವನ್ನು, ತಮ್ಮ ಆಶೋತ್ತರಗಳನ್ನು ಕುರಿತು ಅಗತ್ಯಗಳನ್ನು ಪೂರೈಸಬಲ್ಲ ಪ್ರತಿನಿಧಿಗಳಿಗೆ ವಹಿಸುವರು. ಸರ್ವಾಧಿಕಾರಿ ರಾಷ್ಟ್ರಗಳು ಒಂದು ರೀತಿಯ ಪ್ರಾತಿನಿಧಿಕ ಸ್ವರೂಪವಾದ್ದರಿಂದ ಅಂಥ ರಾಷ್ಟ್ರಗಳಲ್ಲೂ ನಾಯಕರ ಅಗತ್ಯ ಇದ್ದೇ ಇದೆ. ಹಾಗೆ ನೋಡಿದರೆ ವಿಶ್ವಸಂಸ್ಥೆ ಕೂಡ ಜಾಗತಿಕ ರಾಷ್ಟ್ರಪ್ರತಿನಿಧಿಗಳನ್ನೊಳಗೊಂಡ ಒಂದು ಮಹಾರಾಷ್ಟ್ರ. ಎಂದ ಮೇಲೆ ಒಂದು ರಾಷ್ಟ್ರ ಯಾವ ರಾಜಕೀಯ ಪಂಥದ್ದೇ ಆಗಿರಲಿ, ಮುಖ್ಯವಾಗಿ ಅಲ್ಲಿನ ಶಾಲಾಕಾಲೇಜುಗಳಲ್ಲಿ ನಾಯಕನ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕಾಗುತ್ತದೆ. 

	ತರಗತಿಯಲ್ಲಿ ಹಾಗೂ ಇತರ ಸನ್ನಿವೇಶಗಳಲ್ಲಿ ನಾಯಕ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವಾಗ ಎಲ್ಲ ವಿದ್ಯಾರ್ಥಿಗಳನ್ನು ನಾಯಕgನ್ನಾಗಿ ಮಾಡಲು ಯತ್ನಿಸಬಾರದು. ಅದು ಅಗತ್ಯವೂ ಅಲ್ಲ, ಸಾದ್ಯವೂ ಅಲ್ಲ. ಅವರಲ್ಲಿ ಕೆಲವರು ದಕ್ಷ ನಾಯಕರಾಗಬಲ್ಲವರಾದರೆ ಮತ್ತೆ ಕೆಲವರು ಜಾಣ ಹಿಂಬಾಲಕರಾಗಬಲ್ಲರು. ಈ ಎರಡು ರೀತಿಯ ವಿದ್ಯಾರ್ಥಿಗಳು ತಮತಮಗೆ ಬೇಕಾದ ಅನುಭವವನ್ನು ವಾಸ್ತವಿಕ ಸನ್ನಿವೇಶದಲ್ಲಿ ಗಳಿಸಿಕೊಳ್ಳಬಹುದಾದರೆ, ಅದಕ್ಕೆ ಅಗತ್ಯವಾದ ಶಕ್ತಿ ಸಾಮಥ್ರ್ಯಗಳನ್ನು ಅನುವಂಶಿಯವಾಗಿ ಪಡೆದಿರಬೇಕಾಗುತ್ತದೆ.

	ತರಗತಿಯಲ್ಲಿ ಕೆಲವು ವಿದ್ಯಾರ್ಥಿಗಳು ಬಹುಬೇಗ ನಮ್ಮ ಗಮನ ಸೆಳೆಯುತ್ತಾರೆ. ಇತರರಿಗಿಂತ ಅವರು ಬುದ್ದಿವಂತರೂ, ದೃಢಕಾಯರೂ, ವಯಸ್ಸಿನಲ್ಲಿ ಸ್ವಲ್ಪ ಹಿರಿಯರೂ ಆಗಿರುವರು. ಸಾಮಾಜಿಕವಾಗಿ ಮೇಲ್ವರ್ಗದ ಕುಟುಂಬದವರಿಂದ ಬಂದವರಾಗಿದ್ದು ಹಲವಾರು ಆದರಣೀಯ ಗುಣಗಳನ್ನು ಪಡೆದಿದ್ದು ಅವರು ಸಂಸ್ಕøತಿ ಸಂಪನ್ನತೆಗಳನ್ನು ವ್ಯಕ್ತಪಡಿಸುವರು. ಎಲ್ಲಕ್ಕೂ ಮೇಲಾಗಿ ಜೀವನದಲ್ಲಿ ಒಂದು ರೀತಿಯ ನಿಷ್ಠೆಯನ್ನು ತೋರುವರು.  ಅಂತವರೆ ಪ್ರತಿನಿಧಿಗಳಾಗಿ ಆಯ್ಕೆಗೊಂಡು, ಸಾಮೂಹಿಕ ಕಾರ್ಯಗಳಲ್ಲಿ ಸಹಪಾಠಿಗಳನ್ನು ತೊಡಗಿಸತಕ್ಕವರು; ಅವರೇ ಮುಂದೆ ಸಮಾಜದ ನಾಯಕರಾಗಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಜನತೆಯ ಬೆಂಬಲ ಪಡೆದು ಅವರ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸತಕ್ಕವರು. ಶಾಲೆಗಳಲ್ಲೂ ಕಾಲೇಜುಗಳಲ್ಲೂ ಅವರಿಗೆ ಆ ಕಾರ್ಯಕ್ಕೆ ಶಿಕ್ಷಣ ದೊರೆಯಬೇಕು. ನಾಯಕರಾಗ ತಕ್ಕವರಲ್ಲಿ ಕೆಲವರು ಧೈರ್ಯಶಾಲಿಗಳೂ, ಆಕ್ರಮಣಕಾರಿಗಳು, ಕೆಲವೊಮ್ಮೆ ತುಂಟರೂ ಆಗಿರುವುದುಂಟು. ಅವರಿಂದ ತರಗತಿಗೆ ಅಶಿಸ್ತಿನ ತೊಂದರೆ ಬರಬಹುದು. ಮಿಕ್ಕ ವಿದ್ಯಾರ್ಥಿಗಳು ಅಂತವರ ಮಾತುಗಳನ್ನು ಕೇಳಿ ದೊಂಬಿ ಏಳಬಹುದು. ಇದಕ್ಕೆ ಅದುತನಕ ನಾಯಕರಾಗತಕ್ಕವರಿಗೂ ಮಿಕ್ಕವರಿಗೂ ತಕ್ಕ ಶಿಕ್ಷಣ ಇಲ್ಲದಿರುವುದೇ ಕಾರಣ. ಇದನ್ನರಿತ ಕೆಲವು ದೇಶದಲ್ಲಿ ಅಂಥ ತುಂಟರನ್ನೇ ತರಗತಿಯಲ್ಲಿ ಹಿರೇಮಣಿಗಳಾಗಿ (ಪ್ರಿಫೆಕ್ಟ್) ನೇಮಿಸುತ್ತಿದ್ದುದುಂಟು. ಇದರಿಂದ ಎರಡು ರೀತಿಯ ಅನುಕೂಲಗಳುಂಟು. ತಂಟೆಕೋರನಾಯಕ ಶಾಲೆಯ ವಿರುದ್ದ ನಡೆಸಬಹುದಾದ ಪುಂಡಾಟ, ಮುಷ್ಕರ, ಗಲಾಟೆ ಇವೆಲ್ಲಾ ತಪ್ಪುತ್ತದೆ; ಜೊತೆಗೆ ಅಂಥ ಬಲಿಷ್ಠ ನಾಯಕರಿಗೆ ಯುಕ್ತ ಶಿಕ್ಷಣ ದೊರೆತು ಮುಂದೆ ಅವರು ಸಮಾಜ ಹಿತ ಸಾಧಿಸಬಹುದಾದ ನಾಯಕರಾಗುತ್ತಾರೆ. ಅಲ್ಲದೆ ಶಾಲೆಯ ಆಡಳಿತದಲ್ಲಿ ತಾವೂ ಭಾಗವಹಿಸುತ್ತಿರುವ ಭಾವನೆ ಬೆಳೆದು ಅವರಲ್ಲಿ ಹೊಣೆಗಾರಿಕೆ, ಕರ್ತವ್ಯಪ್ರಜ್ಞೆ, ಹೊಣೆಗಾರಿಕೆಯ ಅರಿವು, ಕರ್ತವ್ಯನಿಷ್ಠೆ - ಇವೆಲ್ಲಾ ವರ್ಧಿಸಲು ಅವಕಾಶವಾಗುತ್ತದೆ.

	ನಾಯಕರಾಗತಕ್ಕ ಮಕ್ಕಳಲ್ಲಿ ಕೆಲವು ಲಕ್ಷಣಗಳು ಪ್ರಾಥಮಿಕ ಶಾಲೆಯ ಕೊನೆಯ ಹಂತಗಳಲ್ಲಿ ವ್ಯಕ್ತಪಡುವುದಾದರೂ, ಅವು ಪ್ರೌಢಶಾಲೆಯ ಉತ್ತರಾರ್ಧದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಸಂಶೋಧಕರು ಅಂಥ ಹತ್ತು ಹಲವು ಲಕ್ಷಣಗಳನ್ನು ಗುರುತಿಸುವರು. ಪ್ರತಿಭೆ, ವಾಕ್‍ಶಕ್ತಿ, ಕ್ರಿಯಾತ್ಮಕ ವ್ಯಕ್ತಿತ್ವ, ಕಾರ್ಯಕೌಶಲ್ಯ, ಗಾಂಭೀರ್ಯ, ವಿಶ್ವಾಸಾರ್ಹತೆ ಮತ್ತು ಸೌಜನ್ಯ, ಸಹೃದಯತೆ, ಸರಸ ಪ್ರವೃತ್ತಿ ಇತರರಿಂದ ಕಲಿಯುವ ಮನೋಭಾವ ಇತರರ ಮೇಲೆ ತನ್ನ ಪ್ರಭಾವ ಬೀರಬೇಕೆಂಬ ಆಸಕ್ತಿ- ಇವು ಆ ಹತ್ತು ಲಕ್ಷಣಗಳು. ಈ ಲಕ್ಷಣಗಳುಳ್ಳವರು ತಮ್ಮ ಜೊತೆಗಾರರಲ್ಲಿ ವಿಶ್ವಾಸವನ್ನು ಮೂಡಿಸಿ ಅವರ ಬೆಂಬಲವನ್ನು ಗಳಿಸಿ ಸಾಮೂಹಿಕ ಕಾರ್ಯಗಳನ್ನು ನಿರ್ದೇಶಿಸಿ, ನಿರ್ವಹಿಸಬಲ್ಲರು.  ಅವರನ್ನು ಬೆಂಬಲಿಸುವವರಲ್ಲಿ ಮುಖ್ಯವಾಗಿ ವಿಧೇಯತೆ, ನಮ್ರತೆ, ಅಪ್ಪಣೆಯನ್ನು ಸ್ವೀಕರಿಸಿ ನಡೆಸಬೇಕೆಂಬ ನಂಬಿಕೆ - ಇವು ಇರಬೇಕಾದ ಲಕ್ಷಣಗಳು.  ಜೊತೆಗೆ ನಾಯಕನನ್ನು ಆರಿಸಿಕೊಳ್ಳುವ ಜಾಣ್ಮೆಯು ಅಗತ್ಯ. ತಾವಾಗಿ ಮನವೊಪ್ಪಿ ವಿಶ್ವಾಸದಿಂದ ಆರಿಸದ ಆದರೆ ಇತರರು ಮೇಲೆ ಹೇರಿದ ನಾಯಕನಾದರೆ ಹಿಂಬಾಲಕರು ತೋರಿಕೆಗೆ ನಮ್ರತೆಯಿಂದ ನಡೆದುಕೊಂಡರೂ ಅವರನ್ನು ಹಿಮ್ಮೆಟ್ಟಿಸಲು ಒಳಗೆ ಹಾತೊರೆಯುತ್ತಿರುವರು.

	ನಾಯಕ ಶಿಕ್ಷಣದ ಕಾರ್ಯಕ್ರಮ : ನಾಯಕ ಶಿಕ್ಷಣಕ್ಕೆ ಯುಕ್ತವಾದ ಕಾಲ ಯೌವನದ ಆರಂಭದ ಸಮಯ. ಆಗ ನಾಯಕರಾಗತಕ್ಕವರ ಶಕ್ತಿಸಾಮಥ್ರ್ಯಗಳು ವರ್ಧಿಸುತ್ತಿರುತ್ತವೆ. ಶಾಲಾಸಮಾಜದಲ್ಲಿ ಮುಂದೆ ಬಂದು ಅಧ್ಯಾಪಕರ ಮತ್ತು ಸಹಪಾಠಿಗಳ ಮೆಚ್ಚುಗೆಯನ್ನು ಪಡೆಯುವ ಆಕಾಂಕ್ಷೆ ತೀವ್ರವಾಗಿದ್ದು ಹೊಣೆಗಾರಿಕೆಯನ್ನು ಹೊತ್ತು ಕಾರ್ಯನಿರ್ವಹಿಸುವ ನಿಷ್ಠೆಯು ಅಧಿಕವಾಗಿರುತ್ತದೆ. ಆದ್ದರಿಂದ ತರಗತಿಯಲ್ಲೂ ಇತರ ಸನ್ನಿವೇಶಗಳಲ್ಲೂ ಯುಕ್ತವೆನಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ಪ್ರಥಮ ಮಹಾಯುದ್ದದ ಅನಂತರ ಶಾಲಾಕಾಲೇಜುಗಳಲ್ಲಿ ನಾಯಕ ಶಿಕ್ಷಣಕ್ಕೆ ಪ್ರಾಧಾನ್ಯ ಬಂದು ವಿವಿಧ ರೀತಿಯ ಕಾರ್ಯಕ್ರಮಗಳು ಪ್ರಚಾರಕ್ಕೆ ಬಂದಿವೆ. ಅವುಗಳಲ್ಲಿ ಮುಖ್ಯವಾದುವನ್ನು ಮುಂದೆ ವಿವರಿಸಿದೆ.

1. ಹಿರೇಮಣಿ ಪದ್ದತಿ : ಭಾರತದಲ್ಲಿ ಹಿಂದಿನಿಂದಲೂ ಹಿರಿಯ ಹಾಗೂ ಪ್ರತಿಭಾವಂತ ವಿಧ್ಯಾರ್ಥಿಯನ್ನು ತರಗತಿಯ ಮುಖಂಡನಾಗಿ (ಮಾನಿಟರ್) ಆರಿಸಿ ಅವನಿಗೆ ಕೆಲಮಟ್ಟಿಗೆ ತರಗತಿಯ ನಿರ್ವಹಣೆ ಹಾಗೂ ಬೋಧನೆಯ ಕಾರ್ಯಗಳನ್ನು ವಹಿಸಿಕೊಡುವ ಅಭ್ಯಾಸ ಆಚರಣೆಯಲ್ಲಿದೆ. ಬೋಧನೆಯ ಕಾರ್ಯಕ್ಕಾಗಿ ಇದನ್ನು ಇಂಗ್ಲೆಂಡ್, ಅಮೆರಿಕಾ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳ ಶಾಲೆಗಳಲ್ಲಿ ಮಾನಿಟೋರಿಯಲ್ ಸಿಸ್ಟಂ ಎಂಬ ಹೆಸರಿನಿಂದ ಆಚರಣೆಗೆ ತರಲಾಗಿತ್ತು. ಸಾಮಾನ್ಯವಾಗಿ ಎಲ್ಲರಿಗೂ ಒಪ್ಪಿಗೆಯಾಗುವಂಥ ವಿದ್ಯಾರ್ಥಿಯನ್ನೇ ಅಧ್ಯಾಪಕರು ಆರಿಸುತ್ತಿದ್ದರಿಂದ ಮಿಕ್ಕವರು ಅವನ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹಿರೇಮಣಿಗಳಿಗೆ ತರಗತಿಯಲ್ಲಿ ಶಿಸ್ತನ್ನು ಕಾಪಾಡುವ ಹಿರಿಯ ಹೊಣೆಗಾರಿಕೆ ಇರುತ್ತಿತ್ತಾಗಿ ಎಲ್ಲರಿಗೂ ಒಳ್ಳೆಯ ಶಿಕ್ಷಣವೇ ದೊರಕುತ್ತಿತ್ತು.

2 ಪ್ರಿಫೆಕ್ಟ್ ಪದ್ದತಿ : ಇಂಗ್ಲೆಂಡಿನ ಶಿಕ್ಷಣ ಪದ್ದತಿಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿರುವ ಪಬ್ಲಿಕ್ ಶಾಲೆಗಳಲ್ಲಿ   ಇತ್ತೀಚಿನವರೆಗೂ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಮುಖ್ಯೋಪಾಧ್ಯಾಯರು ನಾಯಕನನ್ನಾಗಿ (ಪ್ರಿಫೆಕ್ಟ್) ನೇಮಿಸುವ ವಾಡಿಕೆಯಿತ್ತು.  ಅವರು ಸಾಮಾನ್ಯವಾಗಿ ಶ್ರೀಮಂತ ಕುಟುಂಬದಿಂದ ಬಂದ ಹಾಗೂ ತಮಗೆ ಬೇಕಾದ ವಿದ್ಯಾರ್ಥಿಯನ್ನು ಅದಕ್ಕಾಗಿ ನಾಮಕರಣ ಮಾಡುತ್ತಿದ್ದರು. ಇತರ ವಿದ್ಯಾರ್ಥಿಗಳು ತೋರಿಕೆಗಾಗಿ ಅವರನ್ನು ಹಿಂಬಾಲಿಸುತ್ತಿದ್ದರು. ನಾಯಕರು ತರಗತಿಯ ಹಾಗೂ ಶಾಲೆಯ ಕಾರ್ಯಕ್ರಮಗಳಲ್ಲಿ ಇತರರನ್ನು ನಿರ್ದೇಶಿಸುತ್ತಿದ್ದು, ಅಷ್ಟಿಷ್ಟು ನಾಯಕತನದ ಶಿಕ್ಷಣ ಪಡೆಯುತ್ತಿದ್ದರು. ಇದರಿಂದಾಗಿ ಮುಂದೆ ಅವರು ಇತರರನ್ನು ಹಿಡಿತದಲ್ಲಿಟ್ಟುಕೊಂಡು ದರ್ಪದಿಂದ ಆಳಬಲ್ಲ ನಾಯಕರಾಗುತ್ತಿದ್ದರು.  ಪ್ರಪಂಚದ ಎಲ್ಲಾ ಭಾಗಗಳಲ್ಲೂ ವಸಾಹತುಗಳನ್ನು ಹೊಂದಿದ್ದು ಅವನ್ನು ಅಧೀನದಲ್ಲಿಟ್ಟುಕೊಳ್ಳಲು ದಕ್ಷ ಶ್ರೀಮಂತ ಅಧಿಕಾರಿಗಳ ಅಗತ್ಯವಿದ್ದ ಆ ಕಾಲಕ್ಕೆ ಅಲ್ಲಿನ ಶಿಕ್ಷಣ ಉಚಿತವಾಗಿತ್ತೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಸಾಮ್ರಾಜ್ಯ ಕರಗಿ ಹೋಗಿದೆಯಾಗಿ ಅಂಥ ಶ್ರೀಮಂತ ನಾಯಕರ ಅಗತ್ಯ ಇಲ್ಲವಾಗಿದೆ. ಜನತೆಯ ಬೆಂಬಲಗಳಿಸಿ ಅವರ ಹಿತವನ್ನು ಸಾಧಿಸಬಲ್ಲ ನಾಯಕರ ಅಗತ್ಯವಿರುವ ಪ್ರಜಾಸತ್ತತೆಯ ಈ ದಿನಗಳಲ್ಲಿ ಪ್ರಿಫೆಕ್ಟ್ ಮಾದರಿಯ ನಾಯಕ ಶಿಕ್ಷಣ ಅನುಚಿತವೆಂದು ಗೊತ್ತಾದಂತೆ ವಿದ್ಯಾರ್ಥಿಗಳ ಶಾಲೆಯ ಸಾಮೂಹಿಕ ಜೀವನ ವಿವಿಧ  ಕ್ಷೇತ್ರಗಳಿಗೆ ತಮ್ಮ ನಾಯಕನನ್ನು (ಕ್ಯಾಪ್ಟನ್) ಆರಿಸುವ ಸಂಪ್ರದಾಯ ಈಗೀಗ ಆಚರಣೆಗೆ ಬರುತ್ತಿದೆ. ಪ್ರಿಫೆಕ್ಟ್ ಶಿಕ್ಷಣ ಪದ್ಧತಿಯನ್ನು ಇಂಗ್ಲೆಂಡಿನ ರಗ್ಬಿ ಎಂಬಲ್ಲಿನ ಪಬ್ಲಿಕ್ ಶಾಲೆಯಲ್ಲಿ ತಾಮಸ್ ಅರ್ನಾಲ್ಡ್ ಎಂಬ ಮುಖ್ಯೋಪಾದ್ಯಾಯ ಪ್ರಚಾರಕ್ಕೆ ತಂದಿದ್ದ. ರಗ್ಬಿ ಮಾದರಿಯ ಇಂಥ ನಾಯಕನ ಶಿಕ್ಷಣ ಅನುಚಿತವೆನಿಸತೊಡಗಿದಾಗ ಅದಕ್ಕೆ ಪರ್ಯಾಯವೆನ್ನಬಹುದಾದ ಕಾರ್ಯಕ್ರಮಗಳು ಬಳಕೆಗೆ ಬರಹತ್ತಿದುವು. ನಾಟಕ, ಚರ್ಚಾಕೂಟ, ಆಟದಬಯಲು, ಪ್ರವಾಸ, ಕ್ವಿಜ್  ಕಾರ್ಯಕ್ರಮ ಮುಂತಾದುವು ನಾಯಕ ಶಿಕ್ಷಣಕ್ಕಾಗಿ ಏರ್ಪಡುತ್ತಿವೆ. ದ್ವಿತೀಯ ಮಹಾಯುದ್ದದ ಅನಂತರ ಮಕ್ಕಳ ದೈಹಿಕ ಪೋಷಣೆಯ ಕಡೆ ಹೆಚ್ಚು ಗಮನ ಕೊಡಲಾಗುತ್ತಿದೆ. ಬೆಳಗ್ಗೆ ಹಾಲು ಪೂರೈಕೆ, ಮಧ್ಯಾಹ್ನ ಊಟದ ವ್ಯವಸ್ಥೆ ಮುಂತಾದ ಸೇವಾಕಾರ್ಯಗಳು ಬಳಕೆಗೆ ಬರುತ್ತಿವೆ.

3 ಲಿಟಲ್ ಕಾಮನ್‍ವೆಲ್ತ್ ಪದ್ದತಿ : ಪ್ರಜಾಪ್ರಭುತ್ವ ಯುಗದಲ್ಲಿ ಪಬ್ಲಿಕ್ ಶಾಲೆಯ ಮಾದರಿಯ ನಾಯಕ ಶಿಕ್ಷಣ ಅನುಚಿತವೆಂಬುದನ್ನು ಅರಿತ ಇಂಗ್ಲೆಂಡಿನ ಶಿಕ್ಷಣವೇತ್ತರು ಅದಕ್ಕಾಗಿ ನೂತನ ಕಾರ್ಯಕ್ರಮಗಳನ್ನು ಅನುಗೊಳಿಸುತ್ತಿರುವರು. ಅವುಗಳಲ್ಲಿ ಕಿರಿಯರ ಪ್ರಜಾಪ್ರಭುತ್ವ (ಲಿಟಲ್ ಕಾಮನ್‍ವೆಲ್ತ್) ಎಂಬ ಕಾರ್ಯಕ್ರಮ ತುಂಬಾ ಜನಪ್ರಿಯವೆನಿಸಿದೆ. ಮೊದಲು ಇದನ್ನು ಹೋಮರ್ ಲೇನ್ ಎಂಬಾತ ಕಾಲ್ಡೆಕಟ್ ಎಂಬಲ್ಲಿನ ಒಂದು ವಸತಿವಿದ್ಯಾಲಯದಲ್ಲಿ ಆರಂಭಿಸಿದ. ಆ ಶಾಲೆಯ ಆಡಳಿತವನ್ನೆಲ್ಲಾ ವಿದ್ಯಾರ್ಥಿನಾಯಕರಿಗೇ ವಹಿಸಲಾಯಿತು. ಆ ಕಾರ್ಯಕ್ರಮ ಎಷ್ಟರಮಟ್ಟಿನ ನಾಯಕ ಶಿಕ್ಷಣ ನೀಡಬಹುದೆಂಬುದನ್ನು ಪರಿಶೀಲಿಸಲಾಯಿತು. ನಾಯಕ ಶಿಕ್ಷಣದಲ್ಲಿ ತೀರ ಬಿಗಿಮುಷ್ಠಿಯಾಗಲಿ ತೀರ ಸ್ವಾತಂತ್ರ್ಯವಾಗಲಿ ಉಚಿತವಲ್ಲ. ಅಧ್ಯಾಪಕರ ನಿರ್ದೇಶನದಲ್ಲಿ ಅದು ವ್ಯವಸ್ಥೆಗೊಳ್ಳಬೇಕು ಎಂಬುದು ಆಗ ತೇಲಿದ ತತ್ತ್ವ. ಇಂಥ ವಿದ್ಯಾರ್ಥಿ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ತಿದ್ದಿಕೊಂಡು ಅನೇಕ ಶಾಲಾಕ್ಷೇತ್ರಗಳಲ್ಲಿ ಅದನ್ನು ರೂಢಿಗೆ ತರಲಾಗಿದೆ.
ಅಮೆರಿಕದಲ್ಲಿ ನಾಯಕ ಶಿಕ್ಷಣ: ಅಮೆರಿಕಾದ ಸಂಯುಕ್ತ ಸಂಸ್ಥಾನಗಳ ನಾಯಕ ಶಿಕ್ಷಣಕ್ಕೆ ತುಂಬಾ ಆಸಕ್ತಿ ಕಂಡುಬರುತ್ತದೆ. ಅಲ್ಲಿನ ಶಾಲಾಕಾಲೇಜುಗಳಲ್ಲಿ ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ನಿರ್ವಹಿಸಬೇಕಾದ ಕರ್ತವ್ಯ ಹೊಣೆಗಾರಿಕೆಯಲ್ಲಿ ಶಿಕ್ಷಣವೀಯಲು ಬಗೆಬಗೆಯ ಕಾರ್ಯಕ್ರಮಗಳು ಪ್ರಚಾರಕ್ಕೆ ಬಂದಿದೆ. ತರಗತಿಯಲ್ಲಿ ನೀಡುವ ಅನೌಪಚಾರಿಕ ರೀತಿಯ ಶಿಕ್ಷಣದ ಜೊತೆಗೆ ತರಗತಿಯ ಹೊರಗಿನ ಔಪಚಾರಿಕ ಹಾಗೂ ನೆರವೆನ್ನಬಹುದಾದ ಹಲವು ರೀತಿಯ ಕಾರ್ಯಕ್ರಮಗಳೂ ಆಚರಣೆಗೆ ಬಂದಿವೆ. ವಿದ್ಯಾಥಿಗಳಿಗೆ ಶಾಲಾಕಾಲೇಜುಗಳ ಆಡಳಿತದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ದೊರೆತಿದೆ. ಅಂಥ ನಾಯಕ ಶಿಕ್ಷಣಕಕ್ಕಾಗಿ ಆಡಳಿತ ಮಂಡಳಿಗಳನ್ನು ಸ್ಥಾಪಿಸಿ ಅದರಲ್ಲಿ ವಿದ್ಯಾರ್ಥಿಗಳು ಬಹುಮಟ್ಟಿನ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ. ಅಂಥ ಹಲವು ಬಗೆಯ ಆಡಳಿತ ಮಂಡಳಿಗಳು ಈಗ ಪ್ರಚಾರದಲ್ಲಿವೆ. ಅವುಗಳಲ್ಲಿ ಕೆಲವನ್ನು ಮುಂದೆ ವಿವರಿಸಿದೆ.

	1 ಸಿಂಪಲ್ ಕೌನ್ಸಿಲ್ : ಇದು ಸುಮಾರು ಆರಿಸಿದ ಹತ್ತು ವಿದ್ಯಾರ್ಥಿಗಳನ್ನೊಳಗೊಂಡ ಸರಳ ರೀತಿಯ ಆಡಳಿತ ಮಂಡಳಿ. ವರ್ಷಕ್ಕೊಮ್ಮೆ ವಿದ್ಯಾರ್ಥಿಗಳು ಅವರನ್ನು ಆರಿಸುವರು. ಮೊದಮೊದಲು ಅಧ್ಯಾಪಕರೇ ಹಿರಿಯ ಹಾಗೂ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ನಾಮಕರಣ ಮಾಡುತ್ತಿದ್ದರು. ಈಚೆಗೆ ವಿದ್ಯಾರ್ಥಿಗಳು ಮತ ನೀಡಿ ತಮಗೊಪ್ಪಿದವರನ್ನು ಆರಿಸುವ ಸಂಪ್ರದಾಯ ಬೆಳೆದು ಬರುತ್ತಿದೆ. ಅನಂತರ ಮಂಡಲಿ ತನ್ನ ಅಧ್ಯಕ್ಷರನ್ನು ಆರಿಸುವುದು. ಈ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಮುಂದೆ ವಯಸ್ಕ ಪೌರರಾಗಿ ತಮ್ಮ ಹಕ್ಕನ್ನು ಚಲಾಯಿಸುವ ಹಾಗೂ ನಾಯಕರಾಗಿ ಹೊಣೆಗಾರಿಕೆ ವಹಿಸಿಕೊಳ್ಳುವ ಕಾರ್ಯದಲ್ಲಿ ನೇರ ಶಿಕ್ಷಣ ದೊರೆತಂತಾಗುತ್ತದೆ. 

	2. ಗೃಹವ್ಯವಸ್ಥೆ : ಶಾಲೆ ತೀರ ದೊಡ್ಡದ್ದಾಗಿದ್ದರೆ ಗೃಹ ವ್ಯವಸ್ಥೆಯ ಪದ್ದತಿ ಆಚರಣೆಯಲ್ಲಿರುವುದು. ಶಾಲೆಯನ್ನು ಹಲವು ಗೃಹಗಳನ್ನಾಗಿ ವಿಂಗಡಿಸಿ ಪ್ರತಿ ಗೃಹದಿಂದಲೂ ಒಬ್ಬೊಬ್ಬ ಸದಸ್ಯರನ್ನು ಆರಿಸಿ ಕೇಂದ್ರ ಆಡಳಿತ ಮಂಡಳಿ ರಚಿಸಲಾಗುವುದು. ಆಯಾ ಸದಸ್ಯ ತನ್ನ ಗೃಹದ ಹಿತವನ್ನು ರಕ್ಷಿಸಿಕೊಂಡು ಬರುವುದರ ಜೊತೆಗೆ ಸಮಗ್ರ ಶಾಲೆಯ ಹಿತವನ್ನೂ ಸಾಧಿಸುವ ಹೊಣೆ ಹೊತ್ತಿರುವನು. ಕೇಂದ್ರ ಮಂಡಳಿ ಹಲವು ಉಪಸಮಿತಿಗಳನ್ನು ರಚಿಸಿ ಒಂದೊಂದು ಕೆಲಸ ಗೊತ್ತುಮಾಡುವುದು. ಗ್ರಂಥಾಲಯ, ಆಟಪಾಠಗಳು, ಊಟದ ವ್ಯವಸ್ಥೆ, ಚರ್ಚಾಗೋಷ್ಠಿ, ಕ್ವಿಜ್ ಕಾರ್ಯಕ್ರಮ ಮುಂತಾದುವುಗಳ ವ್ಯವಸ್ಥೆಗಾಗಿ ಅಂಥ ಉಪಸಮಿತಿಗಳು ನೇಮಕವಾಗುವುವು. ಅವು ತಮ್ಮ ಕಾರ್ಯಗಳನ್ನು ನಿರ್ವಹಿಸುವಾಗ ಪರಿಣಾಮಕಾರಿಯಾಗಬಹುದೆನ್ನದಾದ ನಾಯಕ ಶಿಕ್ಷಣ ದೊರಕುವುದು. ಕೇಂದ್ರ ಮಂಡಲಿ ಇಡೀ ಶಾಲೆಗೆ ಸಂಬಧಿಸಿದಂತೆ ನೀತಿ ನಿಯಮಗಳನ್ನು ರೂಪಿಸುವುದು. ಶಿಸ್ತಿನ ಸಮಸ್ಯೆಯೆ ಮುಂತಾದ ಸಮಸ್ಯೆಗಳ ಬಗ್ಗೆಯೂ ತೀರ್ಮಾನ ಕೈಗೊಳ್ಳುವುದು. ಪ್ರತಿಯೊಂದು ಉಪಸಮಿತಿಗೂ ಒಬ್ಬೊಬ್ಬ ಅಧ್ಯಕ್ಷನಿದ್ದು, ಆತ ತನ್ನ ಸಮಿತಿಯ ಕಾರ್ಯವನ್ನು ಕೇಂದ್ರ ಸಮಿತಿ ನಿರ್ದೇಶನದಂತೆ ನಡೆಸಿಕೊಂಡು ಬರುವನು.

	3. ಸಿಟಿಕೌನ್ಸಿಲ್ ಪದ್ದತಿ: ಕೆಲವು ಶಾಲೆಗಳಲ್ಲಿ ನಗರಸಭೆಯ ಮಾದರಿಯಲ್ಲಿ ಹಲವಾರು ಹೌಸ್ ಅಥವಾ ವಾರ್ಡ್‍ಗಳನ್ನು ವಿಂಗಡಿಸಿ ಪ್ರತಿ ವಾರ್ಡಿನಿಂದಲೂ ಒಬ್ಬೊಬ್ಬ ಸದಸ್ಯನನ್ನು ಆರಿಸುವರು. ಎಲ್ಲ ಸದಸ್ಯರು ಒಬ್ಬ ಅಧ್ಯಕ್ಷನನ್ನು ಆರಿಸುವರು. ಅವನ ನೇತೃತ್ವದಲ್ಲಿ ಶಾಲೆಯ ಬೇರೆಬೇರೆ ಕ್ಷೇತ್ರಗಳ ಕಾರ್ಯನಿರ್ವಹಣೆ ನಡೆಯುವುದು. ಅದಕ್ಕಾಗಿ ಸಣ್ಣ ಸಣ್ಣ ಉಪಸಮಿತಿಗಳನ್ನು ನೇಮಿಸಲಾಗುವುದು. ನಗರಜೀವನಕ್ಕೆ ಇದರಿಂದ ನೇರ ಶಿಕ್ಷಣ ದೊರಕುವುದರಿಂದ ಈ ಪದ್ಧತಿಯೂ ಜನಪ್ರಿಯವಾಗಿದೆ.

4. ಕಾಂಪ್ಲೆಕ್ಸ್ ಕೌನ್ಸಿಲ್ ಪದ್ದತಿ : ಅಮೆರಿಕದ ಕೆಲವು ದೊಡ್ಡ ಪ್ರೌಢ ಶಾಲೆಗಳಲ್ಲಿ ನಾಯಕ ಶಿಕ್ಷಣಕ್ಕೆ ಸಂಕೀರ್ಣ ಸ್ವರೂಪದ ವ್ಯವಸ್ಥೆಯುಂಟು. ಶಾಲೆಯ ಬೇರೆಬೇರೆ ತರಗತಿಗಳಿಂದ ಆರಿಸಿದ ವಿದ್ಯಾರ್ಥಿನಾಯಕರನ್ನೊಳಗೊಂಡ ಒಂದು ಶಾಸನಸಭೆಯಿರುವುದು. ಆ ಸಭೆಯಿಂದ ಆರಿಸಿದ ಕೆಲವು ಸದಸ್ಯರನ್ನೊಳಗೊಂಡ ಒಂದು ಸಣ್ಣ ಮಂಡಲಿಯೂ ಇರುವುದು. ಮೊದಲನೆಯ ಸಭೆ ಶಾಲೆಯ ಆಡಳಿತಕ್ಕೆ ಸಂಬಧಿಸಿದ ಶಾಸನಗಳನ್ನು ರೂಪಿಸುವುದು; ಎರಡನೆಯ ಮಂಡಲಿ ಆ ರೀತಿಯಂತೆ ಕಾರ್ಯನಿರ್ವಹಿಸುವುದು. ಶಾಸಕಾಂಗ ಕಾರ್ಯಾಂಗಗಳ ವ್ಯವಸ್ಥೆಯ ಜೊತೆಗೆ ಇಬ್ಬರು ಮೂವರು ಆರಿಸಿದ ನಾಯಕರನ್ನೊಳಗೊಂಡ ಒಂದು ನ್ಯಾಯಾಂಗವೂ ಇರುವುದುಂಟು. ಕಾಯಾಂಗಕ್ಕೂ, ನ್ಯಾಯಾಂಗಕ್ಕೂ ಇರುವ ತೊಡಕುಗಳನ್ನು ಇದು ಪರಿಶೀಲಿಸುವುದು. ಇಂಥ ಸಂಕೀರ್ಣಮಂಡಲಿಗಳ ವ್ಯವಸ್ಥೆ ಪ್ರೌಡಶಾಲೆಯ ವಿದ್ಯಾರ್ಥಿಗಳಿಗೆ ಅರ್ಥವಾಗದ ವ್ಯವಸ್ಥೆಯಾದರೂ ಮೇಲ್ವರ್ಗದ ಶಿಕ್ಷಣ ಸಂಸ್ಥೆಯಲ್ಲಿ ಯಶಸ್ವಿಯೆನಿಸಬಹುದಾದ ಕಾರ್ಯಕ್ರಮವಾಗಬಲ್ಲುದು

	5 ಜೂನಿಯರ್ ರಿಪಬ್ಲಿಕ್ ಪದ್ಧತಿ : ಅಮೆರಿಕದ ರಾಜ್ಯಾಂಗದ ರಚನೆಯನ್ನು ಹೋಲುವಂಥ ಒಂದು ವ್ಯವಸ್ಥೆಯುಳ್ಳ ಈ ಪದ್ಧತಿ ಕೆಲವು ಶಾಲೆಗಳಲ್ಲಿ ಪ್ರಚಾರದಲ್ಲಿದೆ. ಶಾಲೆಯ ಕಿರಿಯ ಪೌರರು ತಮ್ಮ ಶಾಲೆಯ ಆಡಳಿತಕ್ಕಾಗಿ ರಚಿಸಿಕೊಳ್ಳು ಈ ವ್ಯವಸ್ಥೆಯಲ್ಲಿ ಶಾಸನಾಂಗ, ಕಾರ್ಯಾಂಗ, ನ್ಯಾಯಾಂಗಗಳು ಪ್ರತಿನಿಧಿಸುವ ಮೂರು ಸಂಸ್ಥೆಗಳಿದ್ದು ಪ್ರತಿಯೊಂದಕ್ಕೂ ಆರಿಸಿದ ವಿದ್ಯಾರ್ಥಿಗಳು ಸದಸ್ಯರಾಗಿರುವರು. ಶಾಲೆಯಲ್ಲಿ ದುರ್ನಡೆತೆಗಾಗಿ ತಪ್ಪಿತಸ್ಥರನ್ನು ಹಿಡಿದು ತರಲು ಪೋಲೀಸ್ ದಳ ಉಂಟು. ವಿಚಾರಣೆ ನಡೆಸುವ ನ್ಯಾಯಾಧೀಶರು ತಪ್ಪಿತಸ್ಥರ ಪರ ವಾದಿಸುವ ವಕೀಲರು, ಶಿಕ್ಷೆ ವಿಧಿಸುವವರೂ ವಿದ್ಯಾರ್ಥಿಗಳೇ. ಆದರೆ ವಿದ್ಯಾರ್ಥಿನಾಯಕರ ಕಾರ್ಯಗಳನ್ನು ಅಧ್ಯಾಪಕರು ವಿಮರ್ಶಿಸಿ ಆಗತ್ಯವೆನಿಸಿದಂತೆ ಸಲಹೆ ನೀಡುವರು. ತಮ್ಮ ಶಾಲೆಯ ಎಲ್ಲಾ ಕಾರ್ಯಗಳನ್ನು (ಬೋಧನೆಯನ್ನುಳಿದು) ವಿದ್ಯಾರ್ಥಿಗಳೇ ಕ್ರಮಕ್ರಮವಾಗಿ ನಿರ್ವಹಿಸುವ ಶಕ್ತಿ ಪಡೆಯಬೇಕೆಂಬುದೂ, ಆ ಮೂಲಕ ರಾಷ್ಟ್ರದಲ್ಲಿ ಯಶಸ್ವಿ ನಾಯಕರಾಗಲು ಉಚಿತ ಶಿಕ್ಷಣ ದೊರೆಯಬೇಕೆಂಬುದು ಈ ವ್ಯವಸ್ಥೆಯ ಉದ್ದೇಶ.

	ಭಾರತದ ಶಾಲೆಗಳಲ್ಲಿ ನಾಯಕ ಶಿಕ್ಷಣ : ಶಾಲೆಗಳಲ್ಲಿ ಹಿಂದಿನಿಂದಲೂ ಪ್ರಚಾರದಲ್ಲಿರುವ ಹಿರೇಮಣಿ ಪದ್ಧತಿ ವಿದ್ಯಾರ್ಥಿಗಳಿಗೆ ಒಂದು ರೀತಿಯ ನಾಯಕಶಿಕ್ಷಣವನ್ನು ಒದಗಿಸುವ ವ್ಯವಸ್ಥೆಯೇ ಆಗಿದೆ.  ಏಕೋಪಾದ್ಯಾಯ ಪಾಠಶಾಲೆಗಳಲ್ಲಿ ಇಂದಿಗೂ ಈ ಪದ್ಧತಿ ಆಚರಣೆಯಲ್ಲಿದೆ. ಹಲವಾರು ತರಗತಿಗಳುಳ್ಳ ಶಾಲೆಯಲ್ಲಿ ಅಧ್ಯಾಪಕರು ಒಂದು ತರಗತಿಗೆ ಪಾಠ ಮಾಡುತ್ತಿರುವಾಗ ಮಿಕ್ಕ ತರಗತಿಗಳ ಬೋಧನೆ ಮತ್ತು ಶಿಸ್ತುಪಾಲನೆ ಹಿರೇಮಣಿಗಳ ಪಾಲಿಗೆ ಇರುತ್ತದೆ. ಇದನ್ನು ಬೆಲ್ ಮತ್ತು ಲೆಂಕಾಸ್ಟರ್ ಎಂಬ ಇಂಗ್ಲೆಂಡಿನ ಶಿಕ್ಷಣವೇತ್ತರು ತಮ್ಮ ನಾಡಿನಲ್ಲೂ ಪ್ರಚಾರಕ್ಕೆ ತಂದರು. ಅನಂತರ ಅಮೇರಿಕಾದಲ್ಲೂ ಆಚರಣೆಗೆ ಬಂತು. ಇದನ್ನು ಅನುಕರಿಸಿ ಇಂಗ್ಲೆಂಡಿನ ಪಬ್ಲಿಕ್ ಶಾಲೆಗಳಲ್ಲೂ ವಿದ್ಯಾರ್ಥಿನಿಲಯಗಳಲ್ಲೂ ಪ್ರಿಫೆಕ್ಟ್ ಪದ್ಧತಿ ಅನುಷ್ಠಾನಕ್ಕೆ ಬಂತು.

	ಮೂಲಶಿಕ್ಷಣ ಶಾಲೆಗಳಲ್ಲಿ ನಾಯಕಶಿಕ್ಷಣ: ಭಾರತದಲ್ಲಿ ನೂತನವಾಗಿ ಆರಂಭವಾದ ಮೂಲ ಶಿಕ್ಷಣ ಶಾಲೆಗಳಲ್ಲಿ   ಕ್ಯಾಬಿನೆಟ್ ಪದ್ದತಿಯ ವ್ಯವಸ್ಥೆ ನಾಯಕಶಿಕ್ಷಣಕ್ಕಾಗಿ ಪ್ರಚಾರದಲ್ಲಿದೆ. ಶಾಲೆಯ ಎಲ್ಲಾ ತರಗತಿಗಳಿಂದಲೂ ಒಬ್ಬೊಬ್ಬ ಸದಸ್ಯನನ್ನು ಆರಿಸಿ ಮಂತ್ರಿಮಂಡಲ ರಚಿಸಲಾಗುವುದು. ಅವರಲ್ಲೊಬ್ಬನನ್ನು ನಾಯಕರನ್ನಾಗಿ ಆರಿಸಿ ಮುಖ್ಯಮಂತ್ರಿಯೆಂದು ಕರೆಯಲಾಗುವುದು. ಆರೋಗ್ಯ, ನೈರ್ಮಲ್ಯ, ಉಪಾಹಾರ, ಹಣಕಾಸು ಮತ್ತು ವ್ಯವಸ್ಥೆ - ಮುಂತಾದ ವಿವಿಧ ಶಾಖೆಗಳನ್ನು ಒಬ್ಬೊಬ್ಬ ಮಂತ್ರಿಗೂ ಹಂಚಲಾಗುವುದು. ಒಬ್ಬ ಅಧ್ಯಾಪಕ ಗವರ್ನರ್ ಆಗಿದ್ದು ಅವನ ನೇತೃತ್ವದಲ್ಲಿ ಮಂತ್ರಿಮಂಡಲ ಕಾರ್ಯನಿರ್ವಹಿಸುವುದು. ಪ್ರತಿ ಸದಸ್ಯನು ತನ್ನ ಶಾಖೆಯ ಕಾರ್ಯವನ್ನು ಮಂಡಲಿ ಸೂಚಿಸುವ ನೀತಿಗನುಗುಣವಾಗಿ ನಿರ್ವಹಿಸುವನು. ಆಗಾಗ ಮಂತ್ರಿಮಂಡಲ ಸಭೆ ಸೇರಿ ವಿವಿಧ ಸಮಸ್ಯೆಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದು. ಅಧ್ಯಾಪಕರ ಸಲಹೆ ಮಂತ್ರಿಮಂಡಲಕ್ಕೆ ಅಗತ್ಯವಾದಾಗ ದೊರಕುತ್ತದೆ. ಭಾರತದಲ್ಲಿ ಈಚೆಗೆ ಅನುಷ್ಠಾನಕ್ಕೆ ಬಂದಿರುವ ರಾಜ್ಯಾಂಗ ರಚನೆಗೆ ಅನುಗುಣವಾಗಿರುವ ಈ ಪದ್ದತಿ ಇಲ್ಲಿನ ಜನತೆಯ ನಾಯಕರಾಗಿ ಕೆಲಸ ಮಾಡಲು ಒಳ್ಳೆಯ ಶಿಕ್ಷಣ ದೊರಕಿಸುವುದೆಂದು ಖ್ಯಾತಿಪಡೆದಿದೆ.

	ಪಂಚಾಯಿತಿ ವ್ಯವಸ್ಥೆ : ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಈ ಆಡಳಿತ ವ್ಯವಸ್ಥೆಯ ಮಾದರಿಯಲ್ಲಿ ಕೆಲವು ಪ್ರೌಢಶಾಲೆಗಳು 5 ರಿಂದ 10 ಮಂದಿ ಆರಿಸಿದ ವಿದ್ಯಾರ್ಥಿಗಳನ್ನೊಳಗೊಂಡ ಪಂಚಾಯಿತಿಯನ್ನು ರಚಿಸಿ ಶಾಲೆಯ ಆಡಳಿತಕ್ಕೆ ಸಂಬಧಿಸಿದ ಕೆಲವು ಕಾರ್ಯಗಳನ್ನು ಅದಕ್ಕೆ ವಹಿಸಿ ಆ ಮೂಲಕ ನಾಯಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಳ್ಳುತ್ತಿರುವುದು. ಸಾಮೂಹಿಕ ಪ್ರಾರ್ಥನೆ, ಉಪಾಹಾರ ವ್ಯವಸ್ಥೆ, ಅಕ್ಷರ ಪ್ರಚಾರ, ಹಬ್ಬ ದಿನಚರಿಗಳ ವ್ಯವಸ್ಥೆ, ಪ್ರವಾಸಗಳ ಹಾಗೂ ಶಿಬಿರಗಳನ್ನು ಏರ್ಪಡಿಸುವುದು. ಇವೆ ಮುಂತಾದ ಕಾರ್ಯಕ್ರಮಗಳನ್ನು ಅದು ನಿರ್ವಹಿಸುವುದು. ವಿದ್ಯಾರ್ಥಿಗಳಲ್ಲಿ ತಲೆದೋರುವ ಅಶಾಂತ ಪರಿಸ್ಥಿತಿಯಲ್ಲೂ ಪಂಚಾಯಿತಿ ಮದ್ಯಪ್ರವೇಶಿಸಿ ದಂಗೆ ಮುಷ್ಕರ ಮುಂತಾದುವನ್ನು ತಪ್ಪಿಸುವುದು. ಬಹಳ ಸರಳರೀತಿಯ ವ್ಯವಸ್ಥೆಯಾದರೂ ಇದು ಪರಿಣಾಮಕಾರಿಯಾದ ನಾಯಕಶಿಕ್ಷಣವನ್ನು ಒದಗಿಸಬಲ್ಲುದು.

	ಮೇಲಿನ ಕಾರ್ಯಕ್ರಮಗಳ ಜೊತೆಗೆ ಬಾಲಚಮೂ, ಗರ್ಲ್‍ಗೈಡ್, ಸೇವಾದಳ ಮುಂತಾದಕಾರ್ಯಕ್ರಮಗಳು ನಾಯಕಶಿಕ್ಷಣಕ್ಕೆ ನೆರವಾಗುತ್ತಿವೆ. ಸಾಹಿತ್ಯಸಂಘ, ವಿಜ್ಞಾನಗೋಷ್ಠಿ, ವಸ್ತುಪ್ರದರ್ಶನ, ನಾಟಕ, ವಿವಿಧ ಸ್ಪರ್ಧೆಗಳು-ಇವೇ ಮುಂತಾದ ಕಾರ್ಯಕ್ರಮಗಳೂ ಆ ಕಾರ್ಯದಲ್ಲಿ ಮುಖ್ಯಪಾತ್ರವಹಿಸುತ್ತಿವೆ. 

ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಾಯಕಶಿಕ್ಷಣ : ಈ ಶತಮಾನದ ಪ್ರಥಮಾರ್ಧದಲ್ಲಿ  ಭಾರತ ಕಾಲೇಜುಗಳಲ್ಲಿ, ಕಾಲೇಜಿನ ಹಾಗೂ ವಿಶ್ವವಿದ್ಯಾಲಯದ ಸಂಘಗಳು ತುಂಬಾ ಜನಪ್ರಿಯ ಸಂಸ್ಥೆಗಳಾಗಿ  ಕಾರ್ಯನಿರ್ವಹಿಸುತ್ತಿದ್ದವು. ಆಯ್ಕೆಯಾಗಿ ಬಂದ ಸದಸ್ಯರನ್ನೊಳಗೊಂಡ ಆ ಸಂಸ್ಥೆಗಳು ತಮ್ಮಲ್ಲೆ ಒಬ್ಬರನ್ನು ಅಧ್ಯಕ್ಷರನ್ನಾಗಿ ಆರಿಸಿಕೊಂಡು ಬಹು ದಕ್ಷತೆಯಿಂದ ಕೆಲಸಮಾಡುತ್ತಿದ್ದವು. ವಾರ್ಷಿಕ ಯೋಜನೆಯನ್ನು ಹಾಕಿಕೊಂಡು ಅದನ್ನು ಕಾರ್ಯಗತಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಅಮೂಲ್ಯವೆನ್ನಬಹುದಾದ ನಾಯಕಶಿಕ್ಷಣವನ್ನು ದೊರಕಿಸುತ್ತಿದ್ದವು. ಇದಕ್ಕೆ ಕಾಲೇಜು ಮತ್ತು ವಿಶ್ವವಿದ್ಯಾಲಯ ಉದಾರವಾಗಿ ಅನುದಾನ ನೀಡುತ್ತಿದ್ದವು. ತಜ್ಞರಿಂದ ಉಪನ್ಯಾಸಗಳ ವ್ಯವಸ್ಥೆ, ಚರ್ಚೆ, ವಿಚಾರ ಸಂಕೀರ್ಣ, ಹಬ್ಬದಿನಾಚರಣೆಗಳು, ಪ್ರವಾಸ, ಸಾಮಾಜಿಕ ಕಾರ್ಯಕ್ರಮ, ಗ್ರಂಥಭಂಡಾರ ಮತ್ತು ವಾಚನಾಲಯಗಳ ವ್ಯವಸ್ಥೆ, ಅಂತರ್‍ಗೃಹಕ್ರೀಡೆ,-ಇವೇ ಮುಂತಾದ ಚಟುವಟಿಕೆಗಳು ಏರ್ಪಡುತ್ತಿದ್ದವು. ಸಂಘಗಳು ಅಂದಂದಿಗೆ ಸಭೆ ಸೇರಿ ಮುಖ್ಯ ಕಾರ್ಯಕ್ರಮಗಳ ಬಗ್ಗೆ ತೀರ್ಮಾನ ಕೈಕೊಳ್ಳುತ್ತಿದ್ದವು. ಹಣಕಾಸಿನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದವು. ಆದರೆ ಬರಬರುತ್ತಾ  ಚುನಾವಣೆಗೆ ಸಂಬಧಿಸಿದಂತೆ ಪೈಪೋಟಿ ಹೆಚ್ಚಿತಾಗಿ ಗಲಭೆಗಳಿಗೂ ಕ್ಷುದ್ರ ರಾಜಕೀಯಗಳಿಗೂ ಈ ಸಂಘಗಳು ಕೇಂದ್ರವಾದವು. ಅಲ್ಲದೆ ಹಣದ ದುರುಪಯೋಗ ರಾಜಕೀಯ ಪಕ್ಷಗಳ ಕೈವಾಡ, ವಿಶ್ವವಿದ್ಯಾಲಯ ಮತ್ತು ಕಾಲೇಜು ಪ್ರಾಧಿಕಾರಗಳ ವಿರುದ್ದ ದೂಷಣೆ ಮುಂತಾದ ಅಹಿತ ಪ್ರಸಂಗಗಳು ಹುಟ್ಟಿಕೊಂಡು ಅನೇಕ ವಿಶ್ವವಿದ್ಯಾಲಯಗಳು ಅಂಥ ವಿದ್ಯಾರ್ಥಿ ಸಂಘಗಳನ್ನು ಬಹಿಷ್ಕರಿಸಬೇಕಾಯಿತು. ಅವುಗಳ ಸ್ಥಳದಲ್ಲಿ ಕಾಲೇಜಿನ ವಿಷಯ ವಿಭಾಗಗಳೇ ತಮ್ಮತಮ್ಮ ಸಂಘಗಳನ್ನು ಏರ್ಪಡಿಸಿಕೊಂಡು ವಿದ್ಯಾರ್ಥಿಗಳಿಗೆ ನಾಯಕಶಿಕ್ಷಣಕ್ಕೆ ಅವಕಾಶ ಕೊಡುವ ಪ್ರವೃತ್ತಿ ಈಚೆಗೆ ಬೆಳೆದುಬರುತ್ತಿದೆ.

ಕಾಲೇಜಿನ ವಿಭಾಗಗಳ ಸಂಘಗಳ ಜೊತೆಗೆ ಕರ್ನಾಟಕ ಸಂಘ, ಸಾಹಿತ್ಯ ಸಂಘ, ವಿಜ್ಞಾನ ಸಂಘ, ಗರಡಿ ಸಂಘ, ಈಜುವ ಸಂಘ, ರೋವರ್ ಚಳುವಳಿ, ಮಹಿಳಾ ಸಂಘ, ಕ್ರೀಡಾಕೂಟ, ಪಂದ್ಯಾಟಗಳು-ಮುಂತಾದುವು ನಾಯಕ ಶಿಕ್ಷಣಕ್ಕೆ ಅನೌಪಚಾರಿಕವಾಗಿ ಸಹಕಾರಿಯೆನಿಸಿವೆ. ಭಾರತದ ಕೆಲವು ವಿಶ್ವವಿದ್ಯಾಲಯಗಳು ಈಚೆಗೆ ತಮ್ಮ ಆಡಳಿತ ಮಂಡಲಿಗಳಲ್ಲಿ  ವಿದ್ಯಾರ್ಥಿಗಳಿಗೆ ಸದಸ್ಯತ್ವವನ್ನು ನೀಡಿ ಆ ಮೂಲಕ ಕೆಲವು ಆರಿಸಿದ ವಿದ್ಯಾರ್ಥಿಗಳಿಗೆ ನಾಯಕತ್ವದಲ್ಲಿ ಶಿಕ್ಷಣ ಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.
(ಎಸ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ